ನಿನ್ನೆ ಬಜ್ಪೆಯಲ್ಲಿ ಕಿಡಿಗೇಡಿಗಳಿಂದ ಬರ್ಬರವಾಗಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ತಾಯಿಗೆ ಆತನ ಸಾವಿನ ಸುದ್ದಿ ತಿಳಿಸಿರಲಿಲ್ಲ. ಅಸ್ವಸ್ಥರಾಗಿದ್ದ ಸುಹಾಸ್ ನ ತಾಯಿಗೆ ಇಂದು ಮಗನ ಸಾವಿನ ಸುದ್ಧಿ ತಿಳಿದು ಇನ್ನಷ್ಟು ಆರೋಗ್ಯದಲ್ಲಿ ಏರುಪೇರಾಗಿದ್ದು ಮಗನನ್ನು ಕಳೆದುಕೊಂಡ ತಾಯಿಯ ನೋವು ಊಹಿಸಲು ಸಾಧ್ಯವಿಲ್ಲ. ಕೆಲಸದ ನಿಮಿತ್ತ ದೂರ ಇರುತ್ತಿದ್ದ ಸುಹಾಸ್ ನೊಂದಿಗೆ ದಿನಾಲೂ ಅಮ್ಮ ಫೋನ್ ನಲ್ಲಿ ಮಾತನಾಡುತ್ತ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಆದರೆ ಸುಹಾಸ್ ಶೆಟ್ಟಿ ಕೊಲೆಯಾಗುವ ದಿನ ತನ್ನ ತಾಯಿಗೆ ಎಂದಿನಂತೆ ಕರೆ ಮಾಡಿದ್ದರೂ ಸಹ ತಾಯಿ ಸುಲೋಚನಾ ಅನಿವಾರ್ಯ ಕಾರಣದಿಂದ ಕರೆ ಸ್ವೀಕರಿಸಲಿಲ್ಲ. ಇದನ್ನು ಈಗ ಸುಲಚನಾ ಅವರು ನೆನೆದು ಕಡೇ ದಿನ ಮಗನ ಜೊತೆ ಮಾತನಾಡಲಿಲ್ಲವಲ್ಲ ಎಂದು ಕೊರಗುತ್ತಿದ್ದಾರೆ.

“ನಿತ್ಯವೂ ಫೋನ್ ಮೂಲಕ ಮಗನ ಜೊತೆ ಮಾತನಾಡುತ್ತಿದ್ದೆ. ಆದರೆ ನಿನ್ನೆ ಸಂಬಂಧಿಕರ ಮದುವೆ ಇದ್ದ ಕಾರಣ ಸುಹಾಸ್ ಶೆಟ್ಟಿ ಫೋನ್ ಮಾಡಿದರೂ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಆದರೆ ಸಂಜೆ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು”. ಎಂದು ಅಮ್ಮ ನೋವನ್ನು ಹೇಳಿಕೊಂಡರು. ಬೆಳಗ್ಗೆಯಿಂದ ಸಂಜೆವರೆಗೆ ಮದುವೆ ಕಾರ್ಯಕ್ರಮದಲ್ಲಿದ್ದ ಕಾರಣ ಸುಹಾಸ್ ಶೆಟ್ಟಿಗೆ ಮರಳಿ ಫೋನ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಮದುವೆ ಕಾರ್ಯಕ್ರಮ ಮುಗಿಸಿ ಫೋನ್ ಮಾಡಿದಾಗ ಸುಹಾಸ್ ಶೆಟ್ಟಿ ಫೋನ್ ಸ್ವಿಚ್ ಆಫ್ ಆಗಿತ್ತು. ಅಷ್ಟೊತ್ತಿಗಾಗಲೇ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು ಎಂದು ತಾಯಿ ಸುಲೋಚನಾ ಕಣ್ಣೀರಿಟ್ಟಿದ್ದಾರೆ.
ಸುಹಾಸ್ ನನ್ನ ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ತಾಯಿಯ ನೋವು ಯಾರಿಗೂ ಅರ್ಥವಾಗಲ್ಲ. ಹಿಂದುತ್ವವನ್ನೇ ಉಸಿರಾಗಿಸಿದ್ದ ನನ್ನ ಮಗ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾನೆ ಎಂದು ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ. ಸುಹಾಸ್ ಶೆಟ್ಟಿ ಮನೆಯಲ್ಲಿ ಕುಟುಂಬದವರ ಮತ್ತು ಆಪ್ತ ಬಳಗದವರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸ್ ಇಲಾಖೆ ಆದಷ್ಟು ಬೇಗ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಬೇಕು ಮತ್ತು ಕೊಲೆಗಡುಕರು ಮರಣದಂಡನೆ ಶಿಕ್ಷೆಯಾಗಬೇಕು ಎಂಬುದು ಸಮಾಜದ ಆಶಯ.