Pidayi Tulu Cinema: 2025 ತುಳು ಸಿನಿಮಾಗಳಿಗೆ ಪರ್ವ ಕಾಲ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧಗೊಂಡಿದೆ ಮತ್ತು ಹೆಚ್ಚಿನ ಸಿನಿಮಾಗಳು ದಿನಾಂಕವನ್ನು ಸಹ ಘೋಷಣೆ ಮಾಡಿಕೊಂಡಿದೆ. ಇತ್ತೀಚೆಗೆ ಧರ್ಮಚಾವಡಿ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಕೊಂಡಿದ್ದು, ಈಗ ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ಅವರು ನಿರ್ಮಿಸಿದ, ರಮೇಶ್ ಶೆಟ್ಟಿಗಾರ್ ಬರೆದಿರುವ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶಿಸಿದ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ‘ಪಿದಾಯಿ’ Pidayi Tulu Cinema ತುಳು ಚಲನಚಿತ್ರ ಕರಾವಳಿಯಾದ್ಯಂತ ತೆರೆಕಾಣಲು ಮೇ 9ಕ್ಕೆ ದಿನ ನಿಗದಿಮಾಡಿಕೊಂಡಿದೆ. ಇದರ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸಂತೋಷ್ ಮಾಡ ಅವರು ತಿಳಿಸಿದರು.
ಬಹುನಿರೀಕ್ಷಿತ ‘ಪಿದಾಯಿ’ ಚಿತ್ರವು ಈಗಾಗಲೇ ಕೊಲ್ಕತ್ತಾ ಸಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗುವುದರ ಜೊತೆಗೆ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ವಿಭಾಗಗಳಲ್ಲಿ ಸ್ಪರ್ಧೆಗೆ ಆಯ್ಕೆಯಾಗಿದ್ದು, ಎರಡನೇ ಅತ್ಯುತ್ತಮ ಚಿತ್ರ ಎಂದು ಪ್ರಶಸ್ತಿಯನ್ನು ಸಹ ಪಡೆದಿದೆ.
ವಿಶೇಷವೆಂದರೆ ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ಪ್ರಯೋಗಿಸಿದ್ದು, ಯೋಗೀಶ್ ಅಡಕಳಕಟ್ಟೆ ಮತ್ತು ಖ್ಯಾತ ಸಿನಿಮಾ ಸಾಹಿತಿ ಶಶಿರಾಜ್ ಕಾವೂರವರು ಈ ಕುಣಿತ ಭಜನೆಗೆ ಸಾಹಿತ್ಯವನ್ನು ಬರೆದಿದ್ದಾರೆ. ಒಂದು ಸಾಹಿತ್ಯಕ್ಕೆ ಸಂದೀಪ್ ಬಲ್ಲಾಳ್ ಸಂಗೀತ ನೀಡಿದರೆ ಇನ್ನೊಂದು ಕುಣಿತ ಭಜನೆಗೆ ಶಿನೋಯ್ ಜೋಸೆಫ್ ಸಂಗೀತ ನೀಡಿದ್ದಾರೆ.
ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಹಾಮಾಯಿ ಪಾತ್ರಿಯಾಗಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ಧ್ರುವ, ನಿಹಾ, ಖುಷಿ ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಮುಂತಾದವರು ಅಭಿನಯಿಸಿದ್ದಾರೆ. ಉಣ್ಣೆ ಮಾಡವೂರ್ ಛಾಯಾಗ್ರಾಹಣ, ಸುರೇಶ್ ಅರಸ್ ಸಂಕಲನ, ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಸಂಭಾಷಣೆ ಬರೆದಿದ್ದಾರೆ. ಅಜಯ್ ನಂಬೂದಿರಿ ಈ ಸಿನಿಮಾಕ್ಕೆ ಸಂಗೀತ ನೀಡಿದ್ದು, ಡಾ| ವಿದ್ಯಾಭೂಷಣ್ ಪ್ರಥಮವಾಗಿ ಚಲನಚಿತ್ರದಲ್ಲಿ ಹಾಡಿದ್ದಾರೆ. ಹಿನ್ನಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮುಂತಾದವರು ಕಂಠದಾನ ಮಾಡಿದ್ದಾರೆ.