ಪುತ್ತೂರು: ತುಳು ಸಾಹಿತ್ಯ, ಸಂಶೋಧನೆ, ಜಾನಪದ, ನಾಟಕ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಆರು ಮಂದಿ ಸಾಧಕರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2025 ಮತ್ತು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. Nemu Parava.
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಹಾಗೂ ಹಿರಿಯ ದೈವನರ್ತಕ ನೇಮು ಪರವ ಮಾಡಾವು ಅವರಿಗೆ ಜಾನಪದ ಕ್ಷೇತ್ರದಲ್ಲಿನ ಸುದೀರ್ಘ ಸೇವೆಯನ್ನು ಗುರುತಿಸಿ 2026ನೇ ಸಾಲಿನ ಗೌರವ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿಯು ₹50,000 ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 4ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ. nemu parava

ಐದು ದಶಕಗಳ ದೈವನರ್ತನ ಸೇವೆ
ಕೆಯ್ಯೂರು ಗ್ರಾಮದ ಮಾಡಾವು ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನ ಸೇರಿದಂತೆ ಹಲವು ದೈವಸ್ಥಾನಗಳಲ್ಲಿ ದೈವನರ್ತನ ಸೇವೆ ಸಲ್ಲಿಸಿರುವ ನೇಮು ಪರವ ಮಾಡಾವು ಅವರು ತಮ್ಮ 16ನೇ ವಯಸ್ಸಿನಿಂದಲೇ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಪುತ್ತೂರು, ಕೊಡಗು, ಸುಳ್ಯ ಹಾಗೂ ಬಂಟ್ವಾಳ ಸೇರಿದಂತೆ ಕರಾವಳಿಯ ವಿವಿಧ ಭಾಗಗಳ ದೈವಸ್ಥಾನಗಳಲ್ಲಿ ವರ್ಣರ ಪಂಜುರ್ಲಿ, ಸತ್ಯದೇವತೆ, ಪಿಲಿಚಾಮುಂಡಿ, ರಕ್ತೇಶ್ವರಿ, ಮಲರಾಯ ಸೇರಿದಂತೆ ವಿವಿಧ ದೈವಗಳ ನರ್ತಕರಾಗಿ ಸೇವೆ ಸಲ್ಲಿಸಿದ್ದಾರೆ.
ಸುಮಾರು 50 ವರ್ಷಗಳಿಂದ ದೈವನರ್ತನ ಸೇವೆಯಲ್ಲಿ ತೊಡಗಿಸಿಕೊಂಡಿರುವ ನೇಮು ಪರವ ಅವರು ಕರಾವಳಿಯ ಹಲವು ಗರಡಿಗಳು ಹಾಗೂ ಪುರಾತನ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ನೇಮು ಪರವ ಅವರ ಕುಟುಂಬದಲ್ಲಿಯೂ ದೈವನರ್ತನ ಪರಂಪರೆ ಮುಂದುವರಿದಿದ್ದು, ಅವರ ಪುತ್ರ ರಾಜೇಶ್ ಅವರು ಕೂಡ ಪ್ರಸ್ತುತ ದೈವನರ್ತನ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.
2025 ಮತ್ತು 2026ನೇ ಸಾಲಿನ ಇತರ ಪ್ರಶಸ್ತಿ ಪುರಸ್ಕೃತರು
2025ನೇ ಸಾಲು
- ಸಾಹಿತ್ಯ/ಸಂಶೋಧನೆ: ಪ್ರೊ. ಬಿ. ಶಿವರಾಮ ಶೆಟ್ಟಿ
- ಜಾನಪದ: ಕುಡ್ಡು ಕೊರಗ ಪಾಂಗಾಳ
- ನಾಟಕ/ಸಿನಿಮಾ: ಉಷಾ ಭಂಡಾರಿ, ಬೆಂಗಳೂರು
2026ನೇ ಸಾಲು
- ಸಾಹಿತ್ಯ/ಸಂಶೋಧನೆ: ಕೆ.ಪಿ. ರಾವ್ (ಕಿನ್ನಿಕಂಬಳ ಪದ್ಮನಾಭ ರಾವ್)
- ಜಾನಪದ: ನೇಮು ಪರವ ಮಾಡಾವು
- ನಾಟಕ/ಸಿನಿಮಾ: ಸುಧಾಕರ ಬನ್ನಂಜೆ, ಬೆಂಗಳೂರು
ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಈ ಪ್ರಶಸ್ತಿಗಳು ತುಳು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಮತ್ತಷ್ಟು ಉತ್ತೇಜನ ನೀಡುವಂತಾಗಿದೆ.